ತಾರನ್‍ಡೈಕ್, ಎಡ್ವರ್ಡ್ ಲೀ
	1874-1949. ಅಮೆರಿಕ ಸಂಯುಕ್ತ ಸಂಸ್ಥಾನಗಳ ಪ್ರತಿಭಾವಂತ ಶಿಕ್ಷಣವೇತ್ತ. ಶಿಕ್ಷಣಮನೋವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಆರಂಭಿಸಿದ ಹಾಗೂ ಶಿಕ್ಷಣವೃತ್ತಿಯಲ್ಲಿ ಮಾಪನ ವಿಧಾನಗಳ ಬಳಕೆಯನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಈತನದು; ನಿಘಂಟುಕಾರನಾಗಿ, ಗಣಿತಶಾಸ್ತ್ರದ ಶಾಸ್ತ್ರೀಯ ಪಠ್ಯಪುಸ್ತಕಗಳನ್ನು ರಚಿಸಿ, ಬೋಧನ ಕಾರ್ಯಕ್ಕೆ ಶಾಸ್ತ್ರೀಯ ಬುನಾದಿಯನ್ನು ಹಾಕಿಕೊಟ್ಟು, ಶಿಕ್ಷಣವನ್ನು ಒಂದು ಶಾಸ್ತ್ರೀಯ ವೃತ್ತಿಯನ್ನಾಗಿ ಪರಿರ್ತಿಸುವ ಕಾರ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಸ್ತು ನಿಷ್ಠ ತತ್ತ್ವ ಚಿಂತಕನೀತ. 

	ತಾರನ್‍ಡೈಕ್ ಜನಿಸಿದ್ದು ಮ್ಯಾಸಚೂಸೆಟ್ಸಿನ ವಿಲಿಯಮ್ ಬರ್ಗಿನಲ್ಲಿ, ಸುಮಾರು 200 ವರ್ಷಗಳಿಂದಲೂ ಆ ಪ್ರದೇಶದಲ್ಲೇ ವಾಸಿಸುತ್ತಿದ್ದ ಸಂಪ್ರದಾಯಸ್ಥ ಕ್ರೈಸ್ತಕುಟುಂಬದಲ್ಲಿ, ಅಲ್ಲಿನ ಚರ್ಚಿನಲ್ಲಿ ಧರ್ಮಬೋಧಕನಾಗಿದ್ದ ಈತನ ತಂದೆ ತನ್ನ ಮಕ್ಕಳ ಶಿಕ್ಷಣದಲ್ಲಿ ತುಂಬ ಆಸಕ್ತಿ ವಹಿಸುತ್ತ್ತಿದ್ದ. ತಾರನ್‍ಡೈಕ್ ತನ್ನ ಸಹೋದರರಂತೆ ಶಾಲಾಕಾಲೇಜುಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತ ಮುಂದುವರಿದ. ಆದರೆ ಅಂದು ಪ್ರಚಾರದಲ್ಲಿದ್ದ ಬೋಧನಕ್ರಮವೇ ಮುಂತಾದ ಶಿಕ್ಷಣದ ಪ್ರಕ್ರಮಗಳಲ್ಲಿದ್ದ ನ್ಯೂನತೆಗಳನ್ನು ಸೂಕ್ಷ್ಮಮತಿಯಾದ ಈತ ಗ್ರಹಿಸದಿರಲಿಲ್ಲ. ತಮ್ಮ ಶಿಕ್ಷಣದಲ್ಲಿ ತಂದೆ ತೋರುತ್ತಿದ್ದ ಆಸಕ್ತಿ, ತಾನು ಸ್ವತಃ ಶಾಲಾಕಾಲೇಜುಗಳಲ್ಲಿ ಕಂಡುಕೊಂಡಿದ್ದ ಲೋಪದೋಷಗಳು, ಬೋಧನೆಯೇ ವೃತ್ತಿಯಾಗಿದ್ದ ತನ್ನ ಕುಟುಂಬದ ಸಂಪ್ರದಾಯ - ಇವೆಲ್ಲ ಮುಂದೆ ಈತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸಕ್ಕೆ ಸೇರಿ ಆ ವೃತ್ತಿಯಲ್ಲಿ ಫಲದಾಯಕವಾದ ಸಂಶೋಧನೆ ನಡೆಸಲು ಪ್ರೇರಕಗಳಾದುವೆನ್ನಬಹುದು.
(ಎಸ್.ಕೆ.ಆರ್.) 

	ತಾರನ್‍ಡೈಕ್‍ನ ಬಾಲ್ಯಜೀವನ ಹಲವಾರು ಊರುಗಳಲ್ಲಿ ಕಳೆಯಿತು. ತಂದೆ ಸ್ಥಳದಿಂದ ಸ್ಥಳಕ್ಕೆ ವರ್ಗವಾಗುತ್ತಿದ್ದುದೇ ಇದಕ್ಕೆ ಕಾರಣ. ಆದ್ದರಿಂದ ಜೀವನದಲ್ಲಿ ಅಷ್ಟಾಗಿ ಮಿಳಿತವಾಗಲು ತಾರನ್‍ಡೈಕ್‍ನಿಗೆ ಅವಕಾಶ ಸಿಕ್ಕುತ್ತಿರಲಿಲ್ಲ. ಹೀಗಾಗಿ ಈತ ಏಕಾಂಗಿಯಾಗಿ ಒಂದೆಡೆ ಕುಳಿತು ವ್ಯಾಸಂಗದಲ್ಲಿ ನಿರತನಾಗಿರುತ್ತಿದ್ದ. ಶಾಲಾಶಿಕ್ಷಣ ಮುಗಿಸಿ ಮಿಡ್ಲ್‍ಟರ್ಮ್ ವೆಸ್ಲಿಯನ್ ವಿಶ್ವವಿದ್ಯಾಲಯಕ್ಕೆ ಸೇರಿ ಪದವೀಧರನಾದ. ಆ ವೇಳೆಗೆ ಯೂರೋಪಿನಂತೆ ಅಮೆರಿಕದಲ್ಲೂ ವಿಜ್ಞಾನ ಪ್ರಚಾರಕ್ಕೆ ಬರುತ್ತಿತ್ತು. ಸಾರ್ವತ್ರಿಕ ಶಿಕ್ಷಣದ ಫಲವಾಗಿ ಜನ ಜೀವನದಲ್ಲಿ ಮೂಢಸಂಪ್ರದಾಯಗಳೂ ನಂಬಿಕೆಗಳೂ ಕಡಿಮೆಯಾಗುತ್ತಿದ್ದವು. ಯುವಜನಕ್ಕೆ ಮತೀಯ ಪ್ರಚಾರ ಕ್ಷೇತ್ರಗಳಿಗಿಂತ ಪ್ರಯೋಗಾಲಯಗಳು ಹೆಚ್ಚು ಆಕರ್ಷಣೀಯ ಉದ್ಯೋಗಗಳಾಗಿ ತೋರುತ್ತಿದ್ದವು. ತಾರನ್‍ಡೈಕ್ ತನ್ನ ಕುಟುಂಬದವರಂತೆ ಧಾರ್ಮಿಕ ನಿಷ್ಠೆಯನ್ನು ತಳೆದಿದ್ದರೂ ಮಾನವನ ಉದ್ಧರಣಕ್ಕೆ ವಿಜ್ಞಾನವೊಂದೇ ಪರಿಣಾಮಕಾರಿ ಸಾಧನವೆಂದು ನಿರ್ಧರಿಸಿಕೊಂಡಿದ್ದನಾಗಿ ಅಷ್ಟೇ ನಿಷ್ಠೆಯಿಂದ ಆ ಜೀವವೂ ಶಿಕ್ಷಣಕ್ಷೇತ್ರದಲ್ಲಿ ಸಂಶೋಧನೆಗಳನ್ನು ನಡೆಸಿದ.

	ವಿಜ್ಞಾನ ಸಂಶೋಧಕರಿಗೆ ಮಹಾನಗರಗಳು ಆಕರ್ಷಣೀಯ ನಿವಾಸಸ್ಥಾನ. ಅಲ್ಲಿ ಅವರಿಗೆ ಪ್ರಯೋಗಾಲಯ, ಗ್ರಂಥಾಲಯ, ಉಪಕರಣಗಳು, ಸಮಾಲೋಚನೆಯ ಸೌಲಭ್ಯ, ಮಹಾ ಸಂಸ್ಥೆಗಳ ಧನಸಹಾಯಾದಿ ಪ್ರೋತ್ಸಾಹ- ಇವೆಲ್ಲ ದೊರಕುತ್ತವೆ. ತಾರನ್‍ಡೈಕ್ ಪದವೀಧರನಾಗುವ ವೇಳೆಗೆ ನ್ಯೂಯಾರ್ಕ್ ಮಹಾನಗರವಾಗಿ ಬೆಳೆದಿತ್ತು. ಅಲ್ಲಿ ಈತ ಕೊಲಂಬಿಯ ಕಾಲೇಜಿಗೆ ಸೇರಿ 1899ರಲ್ಲಿ ಡಾಕ್ಟರೇಟ್ ಪದವಿ ಪಡೆದ. ಅನಂತರ ಒಂದು ವರ್ಷಕಾಲ ಬೇರೊಂದು ಊರಿನಲ್ಲಿ ಕೆಲಸಕ್ಕೆ ಸೇರಿದ್ದ ಮತ್ತೆ ನ್ಯೂಯಾರ್ಕ್‍ಗೆ ಬಂದು ಕೊಲಂಬಿಯ ಟೀಚರ್ಸ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ. ಆಗ ತಾನೆ ಕೊಲಂಬಿಯ ವಿಶ್ವವಿದ್ಯಾಲಯ ಖ್ಯಾತಿಗೆ ಬರುತ್ತಿತ್ತು. ರಾಷ್ಟ್ರದ ಶಿಕ್ಷಣ ಸೇವೆಯಲ್ಲಿ ಪ್ರಧಾನ ಪಾತ್ರವಹಿಸುವ ಆಸಕ್ತಿ ಅದಕ್ಕಿತ್ತು. ದೇಶದಲ್ಲಿ ಕಡ್ಡಾಯ ಶಿಕ್ಷಣ ಆಚರಣೆಗೆ ಬಂದು ಪ್ರೌಢ ಶಿಕ್ಷಣ ವಿಸ್ತರಿಸಲಾರಂಭವಾಗಿತ್ತು. ಹೀಗಾಗಿ ಆ ಕಾರ್ಯಗಳಿಗೆ ಪ್ರಶಿಕ್ಷಣ ಪಡೆದ ಅಧ್ಯಾಪಕರನ್ನು ಒದಗಿಸುವ ಕಾರ್ಯಕ್ಕೆ ಆದ್ಯತೆ ಬಂತು. ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ ಗ್ರಾಮೀಣ ನಾರ್ಮಲ್ ಶಾಲೆಗಳು ಶಿಕ್ಷಣ ನೀಡುತ್ತಿದ್ದವು. ಪ್ರೌಢಶಾಲೆಯ ಅಧ್ಯಾಪಕರಿಗೆ ಶಿಕ್ಷಣವೀಯುವ ಕಾರ್ಯ ವಿಶ್ವವಿದ್ಯಾಲಯದ ಶಿಕ್ಷಣವಿಭಾಗದ ಪಾಲಿಗೆ ಬಂತು. ತಾರನ್‍ಡೈಕ್ ಕೆಲಸಕ್ಕೆ ಸೇರುವ ವೇಳೆಗೆ ಕೇವಲ ಖಾಸಗಿ ನಾರ್ಮಲ್ ಶಾಲೆಯಾಗಿದ್ದ ಆ ಸಂಸ್ಥೆ ಕೊಲಂಬಿಯ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರದ ವಿಭಾಗವಾಗಿ ಮಾರ್ಪಟ್ಟಿತ್ತು. ಅಲ್ಲಿ ಕೆಲಸಕ್ಕೆ ಸೇರಿದ್ದರಿಂದ ತಾರನ್‍ಡೈಕ್‍ನಿಗೆ ತನ್ನ ಜೀವನದ ಹೆಬ್ಬಯಕೆಯಾದ ಶಿಕ್ಷಣ ಸಂಶೋಧನೆಗಳಲ್ಲಿ ನಿರತನಾಗಲು ಅನುಕೂಲವಾಯಿತು.

	ಕ್ಲೀವ್‍ಲ್ಯಾಂಡನ್ನು ಬಿಟ್ಟು ನ್ಯೂಯಾರ್ಕಿಗೆ ಬಂದಮೇಲೆ ತಾರನ್‍ಡೈಕ್ ಮಧ್ಯೆ ಒಂದು ವರ್ಷದಷ್ಟು ಕಾಲವನ್ನುಳಿದು ಮಿಕ್ಕ ಸುಮಾರು 40 ವರ್ಷಗಳ ಕಾಲ ಆ ಮಹಾನಗರದಲ್ಲೆ ಇದ್ದ. 1900ರಲ್ಲಿ ಎಲಿಜಬೆತ್ ಮೌಲ್ಟನ್ ಎಂಬಾಕೆಯನ್ನು ಲಗ್ನವಾಗಿ ಮೂರು ವರ್ಷಗಳ ಅನಂತರ ಅಲ್ಲಿನ ಮಾಂಟ್ರೋಸ್ ಪ್ರದೇಶದಲ್ಲಿ ಒಂದು ಮನೆ ಕಟ್ಟಿಕೊಂಡು ಕೊನೆಯವರೆಗೂ ಅಲ್ಲೇ ವಾಸಿಸುತ್ತಿದ್ದು 1949ರ ಆಗಸ್ಟ್ 9ರ ದಿನ ತನ್ನ 75 ನೆಯ ವಯಸ್ಸಿನಲ್ಲಿ ಕಾಲವಾದ. 

	ಹಿಂದಿನಿಂದಲೂ ಏಕಾಂತ ಜೀವನದಲ್ಲಿನ ತಾರನ್‍ಡೈಕ್‍ನ ಆಸಕ್ತಿ ಅವನ ಶಿಕ್ಷಣ ದೃಷ್ಟಿಯ ಮೇಲೆ ಸಾಕಷ್ಟು ಪ್ರಭಾವ ಬೀರಿದಂತೆ ಕಾಣುತ್ತದೆ. ಅವನ ಭಾಗಕ್ಕೆ ಶಿಕ್ಷಣ ಕೇವಲ ವೈಯಕ್ತಿಕ ಕ್ರಿಯೆ ; ಪ್ರಗತಿಶೀಲ ಶಿಕ್ಷಣವೇತ್ತರು ಭಾವಿಸಿದ್ದಂತೆ ಸಾಮಾಜಿಕ ಕ್ರಿಯೆಯೆನಿಸಲಿಲ್ಲ. ಕಲಿಯುವ ವ್ಯಕ್ತಿಯಲ್ಲಿ ಪ್ರಚೋದನೆ - ವರ್ತನೆಗೆ ಸಂಬಧಿಸಿದ ಕ್ರಿಯೆ ಅದು. ಅಧ್ಯಾಪಕರು ಆ ಪ್ರಚೋದನೆ ವರ್ತನೆಗಳನ್ನು ಮಾತ್ರ ನೋಡಿಕೊಳ್ಳಬೇಕು ; ವಿದ್ಯಾರ್ಥಿಯನ್ನಲ್ಲ.' ಇದು ಈತ ಶಿಕ್ಷಣದ ಸ್ವರೂಪದ ಬಗ್ಗೆ ಮೊದಲಿನಿಂದಲೂ ತಳೆದಿದ್ದ ಅಭಿಪ್ರಾಯ. ಈ ಅಭಿಪ್ರಾಯವನ್ನು ಆಧಾರಮಾಡಿಕೊಂಡೇ ಈತ ಎಲ್ಲ ಸಂಶೋಧನೆಗಳನ್ನೂ ನಿಯೋಜಿಸಿ ನಡೆಸಿದನೆನ್ನಬಹುದು. 

	20ನೆಯ ಶತಮಾನದ ಆರಂಭದ ವೇಳೆಗೆ ನಗರಗಳು ಬೆಳೆದು ವಿಶ್ವವಿದ್ಯಾಲಯಗಳು ನಗರಗಳಲ್ಲಿ ಸೇರಿಹೋಗಿ ಅಧ್ಯಾಪಕರ ಶಾಸ್ತ್ರೀಯ ಶಿಕ್ಷಣಕ್ಕೆ ಪ್ರಾಧಾನ್ಯ ಬರುತ್ತಿತ್ತು. ರಾಷ್ಟ್ರ ಶಿಕ್ಷಣ ಸೇವೆಗಾಗಿ ಮೀಸಲಿಡುತ್ತಿದ್ದ ಆಗಾಧ ಪ್ರಮಾಣದ ಹಣವೂ ಎಲ್ಲರ ಗಮನವನ್ನು ಸೆಳೆಯುವಂತಾಗಿತ್ತು. ಶಿಕ್ಷಣವನ್ನು ವೈದ್ಯ, ನ್ಯಾಯ, ಪೌರೋಹಿತ್ಯ ಮುಂತಾದ ಗೌರವಾನ್ವಿತ ವೃತ್ತಿಗಳ ಶ್ರೇಣಿಯಲ್ಲಿ ಸೇರಿಸುವ ಯತ್ನ ಆರಂಭವಾಗಿತ್ತು. ಹಾಗೆ ಶಿಕ್ಷಣವನ್ನು ಶಾಸ್ತ್ರೀಯ ವೃತ್ತಿಯನ್ನಾಗಿ ಮಾಡಬೇಕಾದರೆ ಅದಕ್ಕೆ ಆಧಾರವಾಗಿ ಅಪಾರ ಸೈದ್ಧಾಂತಿಕ ಜ್ಞಾನರಾಶಿ ಸಿದ್ಧವಾಗಬೇಕು. ವೈಜ್ಞಾನಿಕ ಪರೀಕ್ಷ್ಷೆಗಳಿಗೆ ಒಳಪಡಿಸಬಹುದಾದ ಜ್ಞಾನರಾಶಿಯನ್ನು ಪರಿಶೋಧನೆಗಳಿಂದ ರೂಢಿಸಿಕೊಡಬೇಕು. ಸಾಂಪ್ರದಾಯಿಕ ಕುರುಡು ದಾರಿಯನ್ನು ಬಿಟ್ಟು ಶಾಸ್ತ್ರೀಯ ವಿಧಾನದಲ್ಲಿ ಶಿಕ್ಷಣ ಸೇವೆಯನ್ನು ಅಳವಡಿಸಿ ಕೊಡಬೇಕು. ತಾರನ್‍ಡೈಕ್ 30ವರ್ಷಗಳ ಕಾಲ ಸಂಶೋಧನೆ ನಡೆಸಿ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬಿಡಿಸಿದ್ದನಾದರೂ ಅಷ್ಟರಿಂದಲೇ ತೃಪ್ತನಾಗಿರಲಿಲ್ಲ. 1928ರಲ್ಲಿ ಆ ಬಗ್ಗೆ ಬರೆಯುತ್ತ ಈಗ ಸಂಶೋಧನೆ ಭಾಗಶಃ ಅವಶ್ಯಕತೆಗಳನ್ನು ಮಾತ್ರ ರೂಢಿಸಿಕೊಟ್ಟಿದೆ. ಅನೇಕ ಸಮಸ್ಯೆಗಳು ಬಗೆಹರಿದಿಲ್ಲವಾಗಿ ಶಿಕ್ಷಣ ಶಾಸ್ತ್ರೀಯ ವೃತ್ತಿಯಾಗಿ ಇನ್ನೂ ಅಂಗೀಕಾರವಾಗಿಲ್ಲ. ಈ ವಿಳಂಬಕ್ಕೆ ಸಂಶೋಧನೆಗಳ ಅಭಾವವೊಂದೇ ಕಾರಣವಲ್ಲ; ಶಿಕ್ಷಣೇತ್ತರಲ್ಲಿರುವ ಸಂಪ್ರದಾಯಬದ್ಧತೆಯೂ ಕಾರಣ' ಎಂದು ಸೂಚಿಸಿದ. ಅದಕ್ಕಾಗಿ ಈತ ಬಳಸಿಕೊಂಡ ಕಾರ್ಯಕ್ಷೇತ್ರಗಳ ವಿಸ್ತಾರ ವೈವಿಧ್ಯಗಳು ಆಶ್ಚರ್ಯ ಹುಟ್ಟಿಸುವಂತಿವೆ. 

	1 ಶೈಕ್ಷಣಿಕ ಮನೋವಿಜ್ಞಾನ ಕ್ಷೇತ್ರದಲ್ಲಿ : ಕೊಲಂಬಿಯ ಟೀಚರ್ಸ್ ಕಾಲೇಜಿನಲ್ಲಿ ತಾರನ್‍ಡೈಕ್ ಅಧ್ಯಾಪಕರಿಗೂ ಶಿಕ್ಷಣಾಧಿಕಾರಿಗಳಿಗೂ ತರಗತಿಯಲ್ಲಿ ಮನೋವಿಜ್ಞಾನವನ್ನು ಬೋಧಿಸುವಾಗ ಅಂದು ಪ್ರಚಾರದಲ್ಲಿದ್ದ ಅಲೆಕ್ಸಾಂಡರ್ ಬೆಯ್ನ್, ವಿಲಿಯಂ ಜೇಮ್ಸ್ ಮುಂತಾದವರು ರೂಢಿಸಿದ್ದ ಮನೋವಿಜ್ಞಾನದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಅಂದಿಗಾಗಲೇ ಜರ್ಮನಿ ಮತ್ತು ಅಮೆರಿಕದ ಕೆಲವೆಡೆ ನಡೆಯುತ್ತಿದ್ದ ಪರಿಮಾಣಾವಲಂಬಿಯಾದ ತತ್ತ್ವಸಿದ್ಧಾಂತಗಳನ್ನು ಶಿಕ್ಷಣಕ್ಕೆ ಆಧಾರ ಮಾಡಿಕೊಳ್ಳಬೇಕೆಂದು ಹೇಳಿದ. ಆಗ ಶಿಕ್ಷಣಶಾಸ್ತ್ರಕ್ಕೆ ಆಧಾರ ಮಾಡಿಕೊಂಡಿದ್ದ ಆತ್ಮ ಮತ್ತು ಇತರ ಅವಾಸ್ತವ ರೀತಿಯ ಅರ್ಥವಾಗದ ಭಾವನೆಗಳನ್ನೂ ಆರಾಮಕುರ್ಚಿಯ ಸಿದ್ಧಾಂತಗಳನ್ನೂ ನಿರಾಕರಿಸಿ ಪರೀಕ್ಷಿಸಿ ನೋಡಬಹುದಾದ ಭೌತ ಮತ್ತು ಜೀವವಿಜ್ಞಾನಗಳ ವಿಧಾನ, ಭಾವನೆ ಮತ್ತು ಪ್ರಯೋಗಗಳನ್ನು ಬಳಸಿಕೊಂಡು ನೂತನ ಶೈಕ್ಷಣಿಕ ಮನೋವಿಜ್ಞಾನವನ್ನು ಕಟ್ಟಬೇಕಾದ ಅಗತ್ಯವನ್ನು ಪ್ರಚಾರಮಾಡಿದ. ಅದೇ ನಿಷ್ಠೆಯಿಂದ ಪ್ರಯೋಗಾಲಯದಲ್ಲಿ ಕಾರ್ಯ ನಡೆಸಿದ.

	ತಾರನ್‍ಡೈಕ್‍ನಿಗೆ ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸಲು ಅಗತ್ಯವಾದ ಪ್ರತಿಭೆ, ಸಹನೆ ಉತ್ಸಾಹ ಆಸಕ್ತಿ -ಇವೆಲ್ಲ ಇದ್ದರೂ ಅಗತ್ಯವಾದ ಉಪಕರಣಗಳನ್ನು ರಚಿಸುವ ಯಂತ್ರಕೌಶಲ ಅಷ್ಟಾಗಿ ಇರಲಿಲ್ಲ. ಆದ್ದರಿಂದ ವೂಂಟ್, ಟಿಚನರ್, ಜೂಡ್ ಮುಂತಾದವರು ಬಳಸುತ್ತಿದ್ದ ಸಂಕೀರ್ಣ ಉಪಕರಣಗಳನ್ನು ರಚಿಸುವ ಗೋಜಿಗೆ ಈತ ಹೋಗಲಿಲ್ಲ. ಅವುಗಳ ಬದಲು ಪರಿವೀಕ್ಷಣೆ, ಸಮಸ್ಯೆ, ಸನ್ನಿವೇಶಾದಿಗಳನ್ನು ಉಪಕರಣಗಳನ್ನಾಗಿ ಮಾಡಿಕೊಂಡು ಬಂಧನದಿಂದ ತಪ್ಪಿಸಿಕೊಳ್ಳಲು ಮಾರ್ಗ ಹುಡುಕುವುದು. ವ್ಯಕ್ತಿ ತನ್ನ ಮನೋಭಾವಗಳ (ಚಿತ್ರವೃತ್ತಿಗಳ) ಅನುಕ್ರಮ ಸ್ಥಾನವನ್ನು ನಿರ್ಧರಿಸುವುದು, ವಿದ್ಯುಚ್ಛಕ್ತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವ ಹಲವಾರು ಮಾರ್ಗಗಳಲ್ಲಿ ಒಂದನ್ನು ಆರಿಸಿ ಕೊಳ್ಳುವುದು ಇತ್ಯಾದಿ ಸಮಸ್ಯಾ (ಪರೀಕ್ಷಾ) ಸನ್ನಿವೇಶಗಳಲ್ಲಿ ವ್ಯಕ್ತಿಯನ್ನು ಇರಿಸಿ ಆಗ ಆತ ಅಥವಾ ಅದು ತೋರುವ ವರ್ತನೆಯನ್ನು ಪರಿವೀಕ್ಷಿಸಿ ಪರಿಮಾಣಾತ್ಮಕವಾಗಿ ವಿವರಿಸಿ ಸಾರ್ವತ್ರಿಕ ನಿಯಮಗಳನ್ನು ಕಂಡುಹಿಡಿಯಲು ಯತ್ನಿಸಿದ. ಕಲಿವಿನ ಮೇಲೆ ಪ್ರೇರಕಗಳ ಪ್ರಭಾವವನ್ನು ಎಂದರೆ ದಂಡನೆ ಪ್ರಶಂಸೆ ಪುರಸ್ಕಾರ ತಿರಸ್ಕಾರ ಮುಂತಾದವುಗಳ ಪರಿಣಾಮವನ್ನು ಅಭ್ಯಸಿಸುವಾಗ ಈತ ಬಹು ಆಸಕ್ತಿ ಉತ್ಸಾಹಗಳಿಂದ ಮಕ್ಕಳಿಗೆ ಐಸ್‍ಕ್ಯಾಂಡಿ ಹಂಚುತ್ತಿದ್ದನಂತೆ ! ಈ ಪ್ರಯೋಗಗಳು ಈತ ರೂಪಿಸಿ ಪ್ರಚಾರಕ್ಕೆ ತಂದ ಕಲಿವಿನ ನಿಯಮಗಳ ನಿರೂಪಣೆಗೆ ಆಧಾರವಾದುವು. 
	2 ಪ್ರಾಣಿ ಮನೋವಿಜ್ಞಾನ : ತಾರನ್‍ಡೈಕ್ ಬಾಲ್ಯದಿಂದಲೂ ಡಾರ್ವಿನ್ನನ ವಿಕಾಸವಾದದಲ್ಲಿ ತೀವ್ರ ಆಸಕ್ತಿಯನ್ನೂ ದೃಢವಾದ ನಂಬಿಕೆಯನ್ನೂ ಬೆಳೆಸಿಕೊಂಡಿದ್ದ. ಮಾನವನ ವರ್ತನೆಗಳು ಪ್ರಾಣಿಗಳ ವರ್ತನೆಗಳಿಂದ ಕ್ರಮೇಣ ವಿಕಾಸವಾದವೆಂದು ಭಾವಿಸಿ ಮನೋವಿಜ್ಞಾನವನ್ನು ಅರಿತುಕೊಳ್ಳಲು ಪ್ರಾಣಿ ಮನೋ ವಿಭಾಗದ ಅಧ್ಯಯನ ನೆರವಾಗುವುದೆಂದು ಸೂಚಿಸಿ ಆ ದಿಕ್ಕಿನಲ್ಲಿ ಹಲವು ಸಂಶೋಧನೆಗಳನ್ನು ನಡೆಸಿದ. ಮಾನವನ ಶೈಶವದ ವರ್ತನೆಗಳ ಅಧ್ಯಯನದಲ್ಲಿ ಮಾನವ ಶಿಶುಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗದಾಗ ಪ್ರಾಣಿಗಳನ್ನೇ ಬಳಸಿಕೊಂಡ. ಆ ಪ್ರಯೋಗಗಳಿಗಾಗಿ ತೊಡಕುದಾರಿ (ಮೇಸ್) ಸಮಸ್ಯಾಪೆಟ್ಟಿಗೆ ಮುಂತಾದ ಸರಳ ಉಪಕರಣಗಳನ್ನು ಬಳಸಿದ. 
	ಈತನ ಇಂಥ ಸಂಶೋಧನೆಗಳಿಂದ ಪ್ರಾಣಿ ಮನೋವಿಜ್ಞಾನ ಎಂಬ ಮನ ಶ್ಯಾಸ್ತ್ರದ ನೂತನ ಶಾಖೆಯೊಂದು ಆರಂಭವಾಯಿತೆನ್ನಬಹುದು. ಅದಕ್ಕೂ ಹಿಂದೆ ಪ್ರಾಣಿಗಳ ಬುದ್ಧಿಶಕ್ತಿ ಮುಂತಾದ ವರ್ತನೆಗಳ ಬಗ್ಗೆ ಸಾಹಿತ್ಯವೇನೋ ಪ್ರಕಟವಾಗಿತ್ತು. ಆದರೆ ಅದು ಬಹುಮಟ್ಟಿಗೆ ನಿಯಂತ್ರಣ ರಹಿತ ಪ್ರಯೋಗಗಳಿಂದ ರೂಪುಗೊಂಡಿತ್ತು. ಇದನ್ನು ಆಧಾರಮಾಡಿಕೊಂಡು ವ್ಯವಸ್ಥೆಗೊಳಿಸಿದ್ದ ಪ್ರಾಣಿ ಮನೋವಿಜ್ಞಾನದಲ್ಲಿ ಆಧಾರರಹಿತ ಅಂಶಗಳೆಷ್ಟೋ ಸೇರಿಕೊಂಡಿದ್ದುವು. ಜೊತೆಗೆ ಅಂದಿಗಿನ್ನೂ ತೌಲನಿಕ ಮನೋವಿಜ್ಞಾನ ರೂಪುಗೊಂಡಿರಲಿಲ್ಲ. ತಾರನ್‍ಡೈಕ್ ನಿಯಂತ್ರಣದಲ್ಲಿ ಪ್ರಯೋಗಗಳನ್ನು ನಡೆಸಿ ಪ್ರಾಣಿಗಳಲ್ಲಿ ಕಲಿವು ವಿವೇಚನಾ ರೀತಿಯದಲ್ಲವೆಂದು ತೋರಿಸಿದ. ಅದರಿಂದ ಅವುಗಳ ಕಲಿವಿಗೆ ಸಂಬಂಧಿಸಿದ ಸ್ಥಳದಲ್ಲಿ ವೈಜ್ಞಾನಿಕ ಅಂಶಗಳನ್ನು ಒದಗಿಸಿದಂತಾಯಿತು. ಪ್ರಾಣಿಗಳು ಸಮಸ್ಯಾತ್ಮಕ ಸನ್ನಿವೇಶಗಳಲ್ಲಿ ಅಡ್ಡಾದಿಡ್ಡಿಯಾಗಿ ವರ್ತಿಸುತ್ತ ಆಕಸ್ಮಿಕವಾಗಿ ಗೆದ್ದಾಗ ತಮಗೆ ಬಂದ ಹೊಸ ತಿಳಿವನ್ನು ರೂಢಿಸಿಕೊಳ್ಳುತ್ತವೆಂದು ವಿವರಿಸಿ ಅವುಗಳ ಬುದ್ಧಿಶಕ್ತಿ ಅಷ್ಟು ಉನ್ನತಮಟ್ಟದ್ದಲ್ಲವೆಂದು ಸ್ಪಷ್ಟಪಡಿಸಿದ. ಬೆಕ್ಕು, ನಾಯಿ, ಮೀನು, ಕೋತಿ ಮುಂತಾದವುಗಳ ಮೇಲೆ ಪ್ರಯೋಗ ನಡೆಸಿ ಪ್ರಾಣಿ ಮನೋವಿಜ್ಞಾನಕ್ಕೆ ಸಂಬಂಧಿಸಿದ ನೂತನ ಜ್ಞಾನವನ್ನು ಪ್ರಕಟಿಸಿದ. 
	3 ಕಲಿವಿನ ಸ್ವರೂಪ : ಪ್ರಾಣಿಗಳನ್ನು ಸಮಸ್ಯೆಯ ಸನ್ನಿವೇಶಗಳಲ್ಲಿ ಸಿಕ್ಕಿಸಿದಾಗ ಸಮಸ್ಯೆಯನ್ನು ಪರಿಹರಿಸಿ ಸೆಣಸಿ ಗೆದ್ದಾಗ ಅವುಗಳಿಗೆ ಬರುವ ತೃಪ್ತಿ ಉತ್ತೇಜನ ಅಥವಾ ಪ್ರೋತ್ಸಾಹವಾಗಿ ಪರಿಣಮಿಸುತ್ತದೆ. ಆಗ ನರಮಂಡಲದಲ್ಲಿ ಸನ್ನಿವೇಶಕ್ಕೂ ನಡೆಸಿದ ಪ್ರತಿಕ್ರಿಯೆಗೂ ಸಂಬಂಧ ಕಲ್ಪನೆಯಾಗುತ್ತದೆ. ತೃಪ್ತಿ ತರುವ ಆ ಪ್ರತಿಕ್ರಿಯೆ ಪುನರಾವರ್ತನೆಯಾಗುವುದರಿಂದ ಆ ಸಂಬಂಧ ಬಲಗೊಂಡು ತಪ್ಪು ಪ್ರತಿಕ್ರಿಯೆಗಳು ನಿಂತುಹೋಗಿ ಕಲಿವು ಸಿದ್ಧಿಸುತ್ತದೆ. ಪ್ರಾಣಿಗಳಂತೆ ಮಾನವರಲ್ಲೂ ನರಮಂಡಲದಲ್ಲಿ ಪ್ರಚೋದನೆ ವರ್ತನೆಗಳ ಸಂಬಂದ (ಸ್ಟಿಮ್ಯುಲಸ್ ರೆಸ್ಪಾನ್ಸ್ ಬಾಂಡ್ ಅಥವಾ ಎಸ್, ಆರ್, ಬಾಂಡ್) ಏರ್ಪಟ್ಟು ಕಲಿವು ಸಿದ್ಧಿಸುವುದೆಂದು ಸೂಚಿಸಿ ಅದಕ್ಕೆ ಸಂಬಂಧಿಸಿದ ಕಲಿವಿನ ಪರಿಣಾಮ (ಲಾ ಆಫ್ ಎಫೆಕ್ಟ್ಸ್) ನಿಯಮವನ್ನು ರೂಪಿಸಿದ. ಅನಂತರ ಸಂಶೋಧಕರಾದ ಸ್ಕಿನರ್, ಕ್ಲಾರ್ಕ್, ಹೆಲ್ ಮುಂತಾದವರು ಇದನ್ನೆ ಕಲಿವಿನ ಬಲವರ್ಧನೆ (ರಿಇನ್ ಫೋರ್ಸ್‍ಮೆಂಟ್) ಅಥವಾ ಪುಷ್ಟೀಕರಣ ನಿಯಮವೆಂದು ಕರೆದಿರುವರು. ತಾರನ್‍ಡೈಕ್ ತನ್ನ ಸಂಶೋಧನೆಯನ್ನು ಆಧಾರ ಮಾಡಿಕೊಂಡು 'ಮಾನವ ತನ್ನ ಹುಟ್ಟು ಅಥವಾ ಅರ್ಜಿತ ಬಯಕೆಗಳನ್ನು ಈಡೇರಿಸಿಕೊಳ್ಳಲೋಸ್ಕರ ವರ್ತಿಸುತ್ತಾನಾದರೆ ಶಿಕ್ಷಣ ಅಂಥ ಪ್ರಚೋದನೆ ವರ್ತನೆಯ ಸಂಬಂಧವನ್ನು ಪರಿಣಾಮಕಾರಿಯಾಗಿರುವಂತೆ ರೂಪಿಸಿ ಕೊಡತಕ್ಕದ್ದಾಗಿರಬೇಕು. ಅದು ಅನುಚಿತ ರೀತಿಯ ಎಸ್. ಆರ್. ಸಂಬಂಧವನ್ನು ಕಲ್ಪಿಸುವಂತಿದ್ದರೆ ದಂಡನೆಯನ್ನು ಪ್ರತಿಕ್ರಿಯೆ ಅಥವಾ ವರ್ತನೆಯ ಫಲವಾಗಿ ಒದಗಿಸಿ ಅತೃಪ್ತಿಯ ಪರಿಣಾಮವನ್ನು ಮೂಡಿಸಿದರೆ ನರಗಳಲ್ಲಿ ಆ ಪ್ರಚೋದನೆ - ಪ್ರತಿಕ್ರಿಯೆಯ ಸಂಬಂಧ ಶಿಥಿಲವಾಗಿ ಆ ರೀತಿಯ ಪ್ರತಿಕ್ರಿಯೆ ಮುಂದೆ ನಡೆಯುವುದು ನಿಲ್ಲುತ್ತದೆ. ಉದ್ದೇಶಿತ ಪ್ರತಿಕ್ರಿಯೆಗಳಿಗೆ ತೃಪ್ತಿತರುವ ಪರಿಣಾಮವನ್ನು ಎಂದರೆ ಬಹುಮಾನ, ಪ್ರಶಂಸೆ, ಪ್ರಶಸ್ತಿ ಮುಂತಾದುವನ್ನೂ ಅಹಿತ ಪ್ರತಿಕ್ರಿಯೆಗಳಿಗೆ ದಂಡನೆಯನ್ನೂ ನೀಡುವುದರ ಮೂಲಕ ಸೂಕ್ತವರ್ತನೆಗಳನ್ನು ಮಕ್ಕಳಲ್ಲಿ ಅನುಷ್ಠಾನಕ್ಕೆ ತರಬಹುದು. ಅದೇ ಶಿಕ್ಷಣ' ಎಂದು ವಿವರಿಸಿ ಶಿಕ್ಷಣಕಾರ್ಯಕ್ಕೆ ತೀರ ಪಾರಿಭಾಷಿಕವೂ ವ್ಶೆಜ್ಞಾನಿವೂ ಆದ ಅರ್ಥವನ್ನು ಕೊಟ್ಟ, ಶಿಕ್ಷಣದಲ್ಲಿ ಪುರಸ್ಕಾರದಂಡನೆಗಳ ಬಳಕೆ ಅನಾದಿಕಾಲದಿಂದ ಬಳಕೆಯಲ್ಲಿದ್ದರೂ ಅವಕ್ಕೆ ಶಾಸ್ತ್ರೀಯ ಅರ್ಥವನ್ನು ಕಲ್ಪಿಸಿದ ಕೀರ್ತಿ ತಾರನ್‍ಡೈಕ್‍ನಿಗೆ ಸಲ್ಲುತ್ತದೆ. 
	ದಂಡನೆಯಿಂದ ಅಹಿತ ಕಲಿವನ್ನು ತಡೆಯಬಹುದೆಂದು ಮೊದಲು ತಾರನ್‍ಡೈಕ್ ಭಾವಿಸಿದ್ದರೂ ಸಂಶೋಧನೆಗಳನ್ನು ಮುಂದುವರಿಸಿದಂತೆ 1920ರ ವೇಳೆಗೆ ದಂಡನೆಯಿಂದ ಅಹಿತವರ್ತನೆಗಳು ನಿಲ್ಲುವುದರ ಬದಲು ಬಲಗೊಳ್ಳುವುವೆಂಬುದನ್ನು ಕಂಡುಕೊಂಡ. ಹಾಗೆಯೇ ಉದ್ದೇಶಿತ ಪ್ರತಿಕ್ರಿಯೆಗಳಿಗೆ ಪ್ರಶಂಸೆ ನೀಡದಿರುವುದು ಬೋಧನತಂತ್ರದ ದೃಷ್ಟಿಯಿಂದ ಅಸ್ವಾಭಾವಿಕವಾಗುವುದೆಂದೂ ತೋರಿಸಿಕೊಟ್ಟ.
	ಶಾಲಾಜೀವನ ಮಕ್ಕಳಿಗೆ ಹಿತಕರವಾಗಿದ್ದು ತೃಪ್ತಿಸಂತೋಷಗಳನ್ನು ನೀಡುವ ಸ್ಥಳವಾಗಿರಬೇಕೆಂದು ವಾದಿಸುತ್ತಿದ್ದ ಜಾನ್ ಡ್ಯೂಯಿ ಮತ್ತು ಪ್ರಗತಿಶೀಲ ಶಿಕ್ಷಣದ ಪ್ರತಿಪಾದಕರಾದ ಮೇರಿಯೆಟ್ಟ ಜಾನ್ಸನ್ನರ ತತ್ತ್ಪದೃಷ್ಟಿಗೆ ತಾರನ್‍ಡೈಕ್ ಮನಶ್ಯಾಸ್ತ್ರದ ಬೆಂಬಲವನ್ನೊದಗಿಸಿಕೊಟ್ಟ.

I	4 ಶಿಕ್ಷಣದಲ್ಲಿ ಅಭ್ಯಾಸದ ಸ್ಥಾನ : ಬುದ್ಧಿ ಮತ್ತು ಗುಣಶೀಲಗಳು ಸುಲಭವಾಗಿ ವರ್ಧಿಸಲಾರವೆಂದು ಸೂಚಿಸುತ್ತ ತಾರನ್‍ಡೈಕ್ ನಮ್ಮ ಭಾವನೆ ಮತ್ತು ಕ್ರಿಯೆಗಳ ಅಭ್ಯಾಸ ಶಾಸ್ತ್ರೀಯ ರೀತಿಯಲ್ಲಿ ನಿರಂತರವಾಗಿ ನಡೆದಿರಬೇಕೆಂದು ಸಲಹೆಮಾಡಿ ಶಿಕ್ಷಣಕಾರ್ಯದಲ್ಲಿ ಅಭ್ಯಾಸಕ್ಕಿರುವ ಪ್ರಧಾನವನ್ನು ಸ್ಪಷ್ಟಪಡಿಸಿದ. ಆ ಮೂಲಕವೇ ಸುಶಿಕ್ಷಿತರ ಬುದ್ಧಿ, ಮನಸ್ಸು ಮತ್ತು ನಡತೆ ಶಿಸ್ತಿನಿಂದ ಕೆಲಸ ಮಾಡುವಂತಾಗುತ್ತದೆಂಬ ಅರ್ಥವನ್ನು ಕಲ್ಪಿಸಿದ, ಸ್ವಾತಂತ್ರ್ಯ, ಸ್ವಪ್ರೇರಣೆ, ಅಂತರಂಗದ ಪ್ರಭೆ ಮುಂತಾದ ಅಂಶಗಳನ್ನು ಶಿಕ್ಷಣದಲ್ಲಿ ತರುವ ಕೆಲವು ಆಧುನಿಕ ಪದ್ಧತಿಗಳ ಯತ್ನ ವಾಸ್ತವ್ಯಕ್ಕೆ ದೂರವಾದುದೆಂದು ಸೂಚಿಸಿ ಮಕ್ಕಳ ಶಿಕ್ಷಣ ಶಾಸ್ತ್ರೀಯ ರೀತಿಯಲ್ಲಿ ಎಂದರೆ ಕಲಿವಿನ ನಿಯಮಾನುಸಾರ ನಡೆಯಬೇಕೆಂದು ಸೂಚಿಸಿದ. ಈ ತತ್ತ್ವದೃಷ್ಟಿಯನ್ನೆ ಆಧಾರಮಾಡಿಕೊಂಡು 1917ರಲ್ಲಿ ಅಂಕ ಗಣಿತದ ಪಠ್ಯಪುಸ್ತಕವೊಂದನ್ನು ರಚಿಸಿದ. ಅದರಲ್ಲಿ ಸರಿಮಾಡಿದ ಲೆಕ್ಕಗಳಿಗಾಗಿ ಪುರಸ್ಕಾರ ಕಲಿತ, ನಿಯಮಗಳನ್ನು ದೃಢಪಡಿಸಿಕೊಳ್ಳಲು ಅಭ್ಯಾಸದ ಲೆಕ್ಕಗಳು, ಅಂದಿಗಿಂದಿಗೆ ಸಾಧಿಸಿರುವ ಪ್ರಗತಿಯನ್ನು ಅಳೆಯಲು ಪರೀಕ್ಷೆಗಳು- ಇವನ್ನೆಲ್ಲ ಸೇರಿಸಿದ. ಈಚಿನ ಪಠ್ಯಪುಸ್ತಕ ಲೇಖಕರಿಗೆ ಇದು ಉಚಿತ ಮಾದರಿಯಾಗಿದೆ. 

	5 ಮಾನಸಿಕ ಅನುಶಾಸನದ ಸಿದ್ಧಾಂತ (ಡಾಕ್ಟ್ರಿನ್ ಆಫ್ ಮೆಂಟಲ್ ಡಿಸಿಪ್ಲಿನ್) ; ಮನಸ್ಸು ಅನೇಕ ವಿಭಿನ್ನ ಬಿಡಿ ಬಿಡಿ ಶಕ್ತಿಗಳಿಂದಾಗಿದೆಯೆಂದೂ ಆ ಒಂದೊಂದು ಶಕ್ತಿಯನ್ನೂ ಅದಕ್ಕೆ ಅತ್ಯಂತ ಸೂಕ್ತವೆನಿಸುವ ವಿಷಯದ ನಿಷ್ಠಾ ಪೂರ್ಣ ವ್ಯಾಸಂಗದ ಮೂಲಕ ಚುರುಕುಗೊಳಿಸಬಹುದೆಂದೂ ಜ್ಞಾನರಾಜ್ಯದಲ್ಲಿ ಅನೇಕ ಶತಮಾನಗಳಿಂದಲೂ ಪ್ರಚಾರದಲ್ಲಿದ್ದ ಸಿದ್ಧಾಂತವನ್ನು ತಾರನ್‍ಡೈಕ್ ತನ್ನ ಪ್ರಯೋಗಗಳಿಂದ ಸಾಧುವಲ್ಲವೆಂಬುದನ್ನು ತೋರಿಸಿಕೊಟ್ಟ. ಮನಶ್ಯಕ್ತಿಗಳ ಕಸರತ್ತಿನ ಆ ಸಿದ್ಧಾಂತಕ್ಕೆ ಒಂದು ಸಂದರ್ಭದಲ್ಲಿ (ಪರಿಸ್ಥಿತಿ) ಪಡೆದುಕೊಂಡ ತರಪೇತು (ಪ್ರಶಿಕ್ಷಣ) ಅಥವಾ ಅನುಭವ ಅದೇ ರೀತಿಯ ಇನ್ನೊಂದು ಸಂದರ್ಭದಲ್ಲೂ ಪ್ರಭಾವಕಾರಿಯಾಗಿರುತ್ತದೆ ಎಂಬ ತರಪೇತಿನ ವರ್ಗಾಂತರಣದವಾದ ಆಧಾರವಾಗಿತ್ತು. ತಾರನ್‍ಡೈಕ್ ಅನೇಕ ಪ್ರಯೋಗಗಳನ್ನು ನಡೆಸಿ ಆ ವಾದದಲ್ಲಿ ಅಷ್ಟಿಷ್ಟು ಸತ್ಯಾಂಶವಿರಬಹುದಾದರೂ ಅದು ಪೂರ್ಣವಾಗಿ ಸರಿಯಲ್ಲವೆಂದು ತೋರಿಸಿಕೊಟ್ಟ. ಇವನ ಈ ಯತ್ನದಿಂದ ಶಾಲೆಗಳಲ್ಲಿ ಮನಶ್ಯಕ್ತಿಗಳ ಕಸರತ್ತಿಗಾಗಿ ಉಪಯುಕ್ತವೆನಿಸದ ವಿಷಯಗಳನ್ನು ಬೋಧಿಸುವುದು ನಿಂತಿತು. ಪಠ್ಯಕ್ರಮದಲ್ಲಿ ಯಾವ ವಿಷಯವೇ ಆಗಲಿ ಅದರ ಉಪಯುಕ್ತತೆಗಾಗಿ ಸೇರಬೇಕೇ ಹೊರತು ಕಸರತ್ತಿಗಾಗಲ್ಲ ಎಂಬ ನೂತನ ಸಿದ್ಧಾಂತ ಪ್ರಚಾರಕ್ಕೆ ಬಂತು. ಶಿಕ್ಷಣದ ಇತಿಹಾಸದಲ್ಲಿ ತಾರನ್‍ಡೈಕ್‍ನ ಈ ಸಾಧನೆ ಒಂದು ಪ್ರಧಾನ ಘಟ್ಟವೆಂದು ಪರಿಗಣಿತವಾಗಿದೆ.

	6 ಒಂದು ವಿಜ್ಞಾನವಾಗಿ ಶಿಕ್ಷಣ : ಭೌತ ರಸಾಯನಶಾಸ್ತ್ರಗಳಂತೆ ಶಿಕ್ಷಣ ಶಾಸ್ತ್ರವೂ ತನ್ನ ವೃತ್ತಿ ನಿರ್ವಹಣೆಯಲ್ಲಿ ಅಳತೆಯನ್ನೂ ಬಳಸುವ ಅಗತ್ಯವನ್ನು ಮೊದಲು ತಾರನ್‍ಡೈಕ್ ಪ್ರಚಾರಕ್ಕೆ ತಂದ. ನಿಸರ್ಗದಂತೆ ಮಾನವನಲ್ಲೂ ಇರತಕ್ಕದ್ದೆಲ್ಲ ಒಂದು ನಿಯತಪ್ರಮಾಣದಲ್ಲಿರುತ್ತದೆ. ವಿಜ್ಞಾನದ ಭಾಷೆಯಾದ ಸಂಖ್ಯಾವಿವರಣೆಯನ್ನು ಶಿಕ್ಷಣದಲ್ಲೂ ಬಳಸುವ ಅಗತ್ಯವನ್ನು ಅಧ್ಯಾಪಕರಿಗೂ ಆಡಳಿತಗಾರರಿಗೂ ಪರಿಚಯ ಮಾಡಿಕೊಡಲು ವಿಶ್ವವಿದ್ಯಾಲಯದಲ್ಲಿ 1904ರಲ್ಲಿ ಶೈಕ್ಷಣಿಕ ಮಾಪನದ ತರಗತಿಯನ್ನು ಆರಂಭಿಸಿದ. ಆ ವಿದ್ಯಾರ್ಥಿಗಳ ಉಪಯೋಗಕ್ಕಾಗಿ 1904ರಲ್ಲಿ ಮಾನಸಿಕ ಮತ್ತು ಸಾಮಾಜಿಕ ಮಾಪನ ಎಂಬ ಗ್ರಂಥವನ್ನು ರಚಿಸಿದ. 

	7 ಮನೋಮಾಪನ ಮತ್ತು ನಿಷ್ಪತ್ತಿ (ಅಚೀವ್ ಮೆಂಟ್) ಮಾಪನ : ಪರೀಕ್ಷೆಗಳು ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿಯ, ಆ ಮೂಲಕ ಅವರ ಮನಶ್ಯಕ್ತಿಯ ಅಳತೆಯ ಸಾಧನವಾಗಿ ಹಿಂದಿನಿಂದಲೂ ಬಳಕೆಯಲ್ಲಿದ್ದರೂ ಅವು ಕೇವಲ ವೈಯಕ್ತಿಕ ಅಂದಾಜಿನ ಮಾಪನಗಳಾಗಿದ್ದವು. ಒಬ್ಬ ವಿದ್ಯಾರ್ಥಿ ಗಣಿತದಲ್ಲಿ 50 ಪಡೆದನೆಂದರೆ ಅದು ಸರಿಯಾದ ಮಾಪನವಾಗದು. ಅದಕ್ಕೊಂದು ಹೋಲಿಕೆಯ ನಿಕಷದ ಅಗತ್ಯವಿದೆ. 20ನೆಯ ಶತಮಾನದಲ್ಲಿ ಅಂಥದನ್ನು ಒದಗಿಸುವ ಯತ್ನ ನಡೆಯಿತು. ಪ್ರಾಥಮಿಕ ಒಂದನೆಯ ತರಗತಿಯಿಂದ ಸ್ನಾತಕೋತ್ತರ ತರಗತಿಯವರೆಗಿನ ಎಲ್ಲ ತರಗತಿಗಳ ಲಕ್ಷಾಂತರ ವಿದ್ಯಾರ್ಥಿಗಳನ್ನು ರಾಷ್ಟ್ರಕ್ಕೆಲ್ಲ ಅನ್ವಯಿಸುವಂತೆ ಆರಿಸಿಕೊಂಡು ಆಯಾ ತರಗತಿಯ ಪರೀಕ್ಷೆಗಳ ಸಾಮಾನ್ಯಾಂಕ (ನಾರ್ಮಲ್)ಗಳನ್ನು ಕಂಡುಹಿಡಿಯುವ ಯತ್ನ ನಡೆಯಿತು. ಫ್ರಾನ್ಸಿನ ಶಿಕ್ಷಣವೇತ್ತ ಅಲ್ಪ್ರೆಡ್ ಬೀನ್ ರಚಿಸಿದ್ದ ವೈಯಕ್ತಿಕ ಪರೀಕ್ಷೆಗಳನ್ನು ಹಾಗೂ ಕಾರ್ಯನಿರ್ವಹಣಾ ಪರೀಕ್ಷೆಗಳನ್ನು ಕಾಗದ - ಸೀಸದ ಕಡ್ಡಿ ಪರೀಕ್ಷೆಗೆ ಪರಿವರ್ತಿಸಬೇಕಾಗಿತ್ತು. ಅದನ್ನು ಸಾಮೂಹಿಕ ಪರೀಕ್ಷೆಯನ್ನಾಗಿ ಬಳಸಬೇಕಾಗಿತ್ತು. ಅದು ಮೊದಲ ಮಹಾಯುದ್ಧದ ಕೊನೆಯಲ್ಲಿ ಸಾಧ್ಯವಾಯಿತು. ಸೇನೆಗೆ ಹೊಸಬರನ್ನು ಭರ್ತಿಮಾಡುವಾಗ ಸರ್ಕಾರ ಮೂವರು ವಿಜ್ಞಾನಿಗಳ ಸಮಿತಿಯನ್ನು ರಚಿಸಿ ಸೈನಿಕರಿಗೆ ಅವರವರ ಪ್ರತಿಭೆಗೊಪ್ಪುವ ಕೆಲಸ ಕೊಡಲು ವರ್ಗೀಕರಿಸುವಂತೆ ಕೇಳಿತು. ಆ ಸಮಿತಿಯಲ್ಲಿ ತಾರನ್‍ಡೈಕ್ ಒಬ್ಬ ಸದಸ್ಯನಾಗಿದ್ದ. ಸಮಿತಿ ಅನಕ್ಷರಸ್ಥರಿಗಾಗಿ ರೂಪಿಸಿದ 'ಬೀಟ' ಪರೀಕ್ಷಣ ಇವನ ಮೇಲ್ವಿಚಾರಣೆಯಲ್ಲಿಯೇ ತಯಾರಾಯಿತು. ಇಪ್ಪತ್ತುಲಕ್ಷ ಮಂದಿಗೆ ಕೊಟ್ಟು ಅದನ್ನು ಪ್ರಮಾಣೀಕರಿಸಲಾಯಿತು. ಅದು ಕೇವಲ ಸೈನಿಕರ ಬುದ್ಧಿ ಪರೀಕ್ಷೆಗೆಂದು ಸಿದ್ಧಪಡಿಸಿದ್ದು. ಮನೋವಿಜ್ಞಾನಿಗಳು ನೀಡಿದ ಸಲಹೆ ಸರಿಯಾಗಿ ಭವಿಷ್ಯವನ್ನು ಸೂಚಿಸಿತ್ತು. ಆದ್ದರಿಂದ ಅವರ ಉಪಯುಕ್ತತೆ ಇತರ ಕ್ಷೇತ್ರಗಳಲ್ಲೂ ವ್ಯಕ್ತಿಪಟ್ಟಿತು. ಮೂರು ವರ್ಷಗಳ ಅನಂತರ ಮಕ್ಕಳಿಗಾಗಿ ನ್ಯಾಷನಲ್ ಇಂಟಲಿಜೆನ್ಸ್ ಟೆಸ್ಟ್ ಎಂಬ ಪರೀಕ್ಷಣ ಸಿದ್ಧವಾಗಿ 10 ಲಕ್ಷ ಮಂದಿಗೆ ಅದನ್ನು ಕೊಟ್ಟು ಅದನ್ನು ಪ್ರಮಾಣೀಕರಿಸಲಾಯಿತು. ಅದು ಶಾಲಾಮಕ್ಕಳ ಬುದ್ದಿಮಾಪನಕ್ಕೂ ಅನುಕೂಲಿಸುವಂತಾಯಿತು. ಅನಂತರ ತಾರನ್‍ಡೈಕ್ ಕಲಿತವರಿಗಾಗಿ ಸಿ.ಎ.ವಿ.ಡಿ. (ಕಂಪ್ಲೀಟಿಂಗ್ ಅರಿತ್ ಮಿಟಿಕ್ ಒಕ್ಯಾಬ್ಯುಲಿರಿ ಫಾಲೋಯಿಂಗ್ ಡಿಸೆಕ್ಷನ್ ಟೆಸ್ಟ್) ಎಂಬ ಬುದ್ಧಿ ಪರೀಕ್ಷಣವನ್ನೂ ಅನಕ್ಷರಸ್ಥರಿಗಾಗಿ ಮತ್ತೊಂದನ್ನೂ ರೂಪಿಸಿದ. 

	ಬುದ್ಧಿಶಕ್ತಿ ಒಂದು ಘಟಕವಾಗಿ ಕೆಲಸಮಾಡುವುದಿಲ್ಲ ; ಅದು ಅನೇಕ ಪ್ರತ್ಯೇಕ ಅಭಿರುಚಿ, ಶಕ್ತಿಗಳ ರೂಪದಲ್ಲಿದೆ. ಆ ಒಂದೊಂದು ಅಭಿರುಚಿ - ಶಕ್ತಿಯೂ ಪ್ರತ್ಯೇಕ ಪ್ರಚೋದನೆ ವರ್ತನೆಗಳನ್ನು ಅನುಸರಿಸಿ ಕಾರ್ಯಮುಖವಾಗುತ್ತದೆ ಎಂದು ಭಾವಿಸಿದ್ದ ತಾರನ್‍ಡೈಕ್ ಅಂಥ ಬುದ್ಧಿಶಕ್ತಿಯನ್ನು ಪರೀಕ್ಷಿಸಿ ಅಳೆಯಲು ಕಲಿವಿನ ಆದಷ್ಟು ಹೆಚ್ಚು ಅಂಶಗಳಿಂದ ಆಯ್ದ ಪರೀಕ್ಷಣಕ್ರಮವನ್ನು ರಚಿಸಬೇಕೆಂದು ವಾದಿಸಿದ ಹಾಗೂ ಪ್ರತಿವ್ಯಕ್ತಿಯೂ ಅನುವಂಶೀಯವಾದ ಭಿನ್ನ ಸಂಪತ್ತನ್ನು ಹೊಂದಿರುವುದರಿಂದ ಅವನ ಕಲಿಯುವ (ಎಂದರೆ ನರಗಳಲ್ಲಿ ಸಂಬಂಧ ಕಲ್ಪನೆಯಾಗುವ) ಶಕ್ತಿಯೂ ಹೆಚ್ಚು ಕಡಿಮೆಯಿರಬಹುದು ಎಂಬ ಸೂಕ್ಷ್ಮರೀತಿಯ ಅಂಶವನ್ನೂ ಸೂಚಿಸಿ ಮಕ್ಕಳಲ್ಲಿ ವೈಯಕ್ತಿಕ ಭಿನ್ನತೆಗಳಿರುವುವೆಂಬ ಅಂಶವನ್ನೂ ಅದಕ್ಕೆ ಶಾಸ್ತ್ರೀಯ ವಿವರಣೆಯನ್ನೂ ನೀಡಿದ. 

	1914ರಲ್ಲಿ ತಾರನ್‍ಡೈಕ್ ಗುಮಾಸ್ತರ ಅಭಿರುಚಿ ಪರೀಕ್ಷೆಗಳನ್ನು ರಚಿಸಿದ. ಅವನ ಈ ಯತ್ನದಿಂದ ಮುಂದೆ ಉದ್ಯೋಗಕ್ಕೂ ಕಾರ್ಖಾನೆಗಳಿಗೂ ನೇಮಕ ಮಾಡುವಾಗ ನೌಕರನನ್ನು ಆರಿಸಿಕೊಳ್ಳುವ ಪರೀಕ್ಷೆಗಳನ್ನು ತಯಾರಿಸಲು ಅವಕಾಶವಾಯಿತು. 

	8 ವೈಯಕ್ತಿಕ ಮನೋವಿಜ್ಞಾನ— ವಿಭೇದ ಮನೋವಿಜ್ಞಾನ: ಪ್ರತಿಯೊಬ್ಬನೂ ತನ್ನದೇ ಆದ ವ್ಯಕ್ತಿವೈಶಿಷ್ಟ್ಯಗಳನ್ನು ಪಡೆದಿರುವುದರಿಂದ ಮಾದರಿ ವ್ಯಕ್ತಿಯೆಂಬುದು ಶುದ್ಧ ಅಬದ್ಧವೆಂದು ಭಾವಿಸಿದ್ದ ತಾರನ್‍ಡೈಕ್ ಪ್ರತಿಯೊಬ್ಬರನ್ನೂ ಪರೀಕ್ಷಿಸಿ ಅವರಿಗೆ ತಕ್ಕ ಮಾರ್ಗದರ್ಶನ, ಶಿಕ್ಷಣ ಉದ್ಯೋಗ - ಇವನ್ನು ಕೊಡುವ ಅಗತ್ಯವನ್ನು ಸೂಚಿಸಿದ. ಸಮಾಜ, ಸರ್ಕಾರ, ರಾಷ್ಟ್ರ, ಸಾರ್ವತ್ರಿಕ (ಸಾಮೂಹಿಕ) ಶಿಕ್ಷಣಕ್ಕೆ ಕಟ್ಟುಬಿದ್ದಿದ್ದರೂ ವ್ಯಕ್ತಿಶಿಕ್ಷಣವನ್ನು ದುರ್ಲಕ್ಷಿಸುವಂತಿಲ್ಲ ಎಂದು ಎಚ್ಚರಿಸಿ ನಿಜವಾಗಿ ಕಲಿಯುವವರು ವ್ಯಕ್ತಿಗಳು ; ಮನೋವಿಜ್ಞಾ£ ಸಾರ್ವತ್ರಿಕರೂಪದ ಸಿದ್ಧಾಂತಗಳನ್ನು ರೂಪಿಸುವುದು ಆದರೆ ವೈಜ್ಞಾನಿಕ ಬೆಳೆವಣಿಗೆಗಾಗಿ ವ್ಯಕ್ತಿಗಳಲ್ಲಿರುವ ವಿಭೇದಗಳನ್ನನುಸರಿಸಿ ಶಿಕ್ಷಣ ನಡೆಯಬೇಕು ; ಶಿಕ್ಷಣದ ನೀತಿ, ನಿಯಮ, ಮಾರ್ಗ — ಇವೆಲ್ಲ ಸಾಮಾನ್ಯ ನಿಯಮಗಳನ್ನು ಅನುಸರಿಸಿ ರೂಪುಗೊಂಡಿವೆ. ಆದರೆ ಕಾರ್ಯತಃ ವೈಯಕ್ತಿಕವಾಗಿ ಅವನ್ನು ಅನ್ವಯಿಸಬೇಕು ಎಂದು ಸೂಚಿಸಿದ. ವ್ಯತ್ಯಾಸಗಳಲ್ಲಿ ಅನುವಂಶೀಯವಾಗಿ ಬರುವ ಮಾನಸಿಕ ಸಾಮಥ್ರ್ಯಗಳು ಮುಖ್ಯವಾದವು. ಪರಿಸ್ಥಿತಿ ಅವುಗಳ ಮೇಲೆ ಪ್ರಭಾವ ಬೀರಬಹುದಾದರೂ ಅದು ಸ್ವಲ್ಪಮಟ್ಟಿಗೆ ಮಾತ್ರ ಸಾಧ್ಯ ಎಂದು ಹೇಳಿ. ಪರಿಸ್ಥಿತಿ- ಅನುವಂಶೀಯತೆಗಳ ಸುಧಾರಿತ ವಾದವಿವಾದಕ್ಕೆ ಹೊಸ ರೂಪ ಕೊಟ್ಟ. ಏಕಾಂಡಜನ್ಯ, ಅವಳಿ, ಸೋದರ ಅವಳಿ, ಸೋದರರು, ಸಂಬಂಧವಿಲ್ಲದವರು - ಇವರೆಲ್ಲರನ್ನೂ ಪರೀಕ್ಷಿಸಿ ಪ್ರಯೋಗ ನಡೆಸಿದ. ಅನುವಂಶೀಯತೆಗೆ ಪ್ರಾಮುಖ್ಯವಿತ್ತಿದ್ದರಿಂದ ಸಮಾಜ ಪರಿಸ್ಥಿತಿಯನ್ನು ದುರ್ಲಕ್ಷಿಸುವಂತಿಲ್ಲ. ಬೋಧನೆ ಸನ್ನಿವೇಶ - ಇವೆಲ್ಲವನ್ನು ಉತ್ತಮಪಡಿಸಬೇಕು. ಪರಿಸ್ಥಿತಿಯನ್ನು ನಮ್ಮ ಅನುಕೂಲಕ್ಕೆ ಬದಲಾಯಿಸುವುದು ಜೀವನದ ಕಲೆ. ಅದಕ್ಕಾಗಿ ಅವನಿಗಿರುವ ಮಹದುಪಕರಣವೇ ಕಲಿಯುವ ಶಕ್ತಿ. ಈ ಪ್ರಪಂಚದಲ್ಲಿ ವಿವೇಚನೆ, ನ್ಯಾಯ - ತೀರ್ಮಾನ ಇವಕ್ಕೆಲ್ಲ ಅದರಿಂದಲೇ ಸ್ಥಾನವಿರುವುದು ಎಂದು ಸೂಚಿಸಿ ಮಾನವ ಕಲಿಯುವ ಶಕ್ತಿಯ ಪ್ರಾಮುಖ್ಯವನ್ನು ಎತ್ತಿಹಿಡಿದ. ಆ ಶಕ್ತಿಯನ್ನು ಪ್ರಚೋದಿಸಿ ಬೆಳೆಸುವ ಹೊಣೆಗಾರಿಕೆಯನ್ನು ಶಾಲಾ ಕಾಲೇಜುಗಳಿಗೆ ಸಮಾಜ ವಹಿಸಿದೆ ಎಂದೂ ತಿಳಿಸಿದ. 

	ತನ್ನ ಜೀವಿತ ಕಾಲದಲ್ಲೇ ತಾರನ್‍ಡೈಕ್ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಸಂಶೋಧನೆಗಳು ಬೀರಿರುವ ಪ್ರಭಾವವನ್ನು ಕಣ್ಣಾರೆ ನೋಡಿ ಆನಂದಿಸಿದ. ಈತನ ಸಾಧನೆಗಳಿಗಾಗಿ ರಾಷ್ಟ್ರ ಸೂಕ್ತ ರೀತಿಯಲ್ಲಿ ಮನ್ನಣೆ ನೀಡಿತು. ಪಠ್ಯಪುಸ್ತಕವೇ ಮುಂತಾದ ಬೋಧನಸಾಮಗ್ರಿಗಳನ್ನು ಉತ್ತಮಪಡಿಸಿದ್ದಕ್ಕಾಗಿ ಇಡೀ ರಾಷ್ಟ್ರವೇ ಈತನನ್ನು ಕೊಂಡಾಡಿತು. ಅಮೆರಿಕ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳೂ ವೈಜ್ಞಾನಿಕ ಸಂಸ್ಥೆಗಳೂ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದುವು. ರಾಷ್ಟ್ರೀಯ ಪರಿಷತ್ತುಗಳು ಸದಸ್ಯತ್ವ ನೀಡಿ ಗೌರವಿಸಿದವು. 1925ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯ ಸುವರ್ಣಪದಕವಿತ್ತು ಇವನನ್ನು ಸನ್ಮಾನಿಸುತ್ತ `ಈ ಗೌರವ ತಾರನ್‍ಡೈಕ್ ವಿಜ್ಞಾನವನ್ನು ಇತರ ಕ್ಷೇತ್ರಗಳಿಗೂ ಮುಖ್ಯವಾಗಿ ಶಿಕ್ಷಣಕ್ಷೇತ್ರಕ್ಕೂ ಅನ್ವಯಿಸುವ ಕಾರ್ಯದಲ್ಲಿ ಸಲ್ಲಿಸಿರುವ ಸೇವೆಗಾಗಿ' ಎಂದು ಉಲ್ಲೇಖಿಸಿತು.      									(ಬಿ.ಕೆ.; ಎ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ